ಮಾರ್ಗನ್, ಲೂಯಿಸ್ ಹೆನ್ರಿ
 1818-81. ಅಮೆರಿಕದ ಪ್ರಸಿದ್ಧ ಮಾನವವಿಜ್ಞಾನಿ, ವಕೀಲ, ರಾಜನೀತಿಜ್ಞ ಹಾಗೂ ಮಾನವಕುಲಶಾಸ್ತ್ರಜ್ಞ. ಹುಟ್ಟಿದ್ದು ನ್ಯೂ ಯಾರ್ಕಿನ ಆರೋರಾ ಎಂಬಲ್ಲಿ. ಗಣ್ಯ ವೇಲ್ಸ್ ಕುಟುಂಬಕ್ಕೆ ಸೇರಿದ ಮಾರ್ಗನ್ ಯೂನಿಯನ್ ಕಾಲೇಜಿಗೆ ಸೇರುವ ಮೊದಲು ಆರೋರಾದಲ್ಲಿದ್ದ ಕಾಯುಗ ಅಕಾಡೆಮಿಯಲ್ಲಿ ವಿದ್ಯಾರ್ಜನೆ ಮಾಡಿದ. ಅನಂತರ ಯೂನಿಯನ್ ಕಾಲೇಜಿನಲ್ಲಿ ಶಿಕ್ಷಣ ಪಡೆದು 1840ರಲ್ಲಿ ಪದವೀಧರನಾದ. ಮುಂದೆ ನ್ಯಾಯಶಾಸ್ತ್ರ ಓದಿ ಎಲ್.ಎಲ್.ಬಿ. ಪದವಿ ಪಡೆದ. 1844ರಲ್ಲಿ ರೋಚೆಸ್ಟರಿಗೆ ಬಂದು ಅಲ್ಲಿ ವಕೀಲಿ ವೃತ್ತಿ ಕೈಗೊಂಡ. 1851ರಲ್ಲಿ ತನ್ನ ಸಂಬಂಧಿಕಳಾಗಿದ್ದ ಮೇರಿ ಎಲಿಜೆಬತ್ ಸ್ಟೀಲಳನ್ನು ವಿವಾಹವಾಗಿ ಮೂರು ಮಕ್ಕಳ ತಂದೆಯಾದ. 1850ರ ಅನಂತರ ಮಾರ್ಗನ್ ಮಿಚಿಗನ್ನಿನಲ್ಲಿ ಗಣಿ ಹಾಗೂ ರೈಲುಮಾರ್ಗಗಳಿಗೆ ಸಂಬಂಧಿಸಿದ ವ್ಯಾಪಾರೋದ್ಯಮಕ್ಕೆ ಬಂಡವಾಳ ಹಾಕಿ ತಕ್ಕಮಟ್ಟಿಗೆ ಸಂಪಾದಿಸಿದ. ಬಂದ ಗಳಿಕೆಯನ್ನು ರೋಚೆಸ್ಟರ್ ವಿಶ್ವವಿದ್ಯಾಲಯಕ್ಕೆ ದಾನಮಾಡಿದ. ಈತ ಎರಡು ಸಲ ನ್ಯೂಯಾರ್ಕಿನ ಲೋಕಸಭೆ ಮತ್ತು ಸೆನೆಟಿನ ಸದಸ್ಯನಾಗಿ ಸೇವೆ ಸಲ್ಲಿಸಿದ. 1868ರಲ್ಲಿ ಈತ ಅಮೆರಿಕದ ಕಲಾ ಹಾಗೂ ವಿಜ್ಞಾನ ಅಕಾಡೆಮಿಯ ಅಧಿಕಾರ ಮಂಡಲಿಯ ಸದಸ್ಯನಾದ. 1875ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‍ನ ಚುನಾಯಿತ ಸದಸ್ಯನಾದ ಮತ್ತು 1879ರಲ್ಲಿ ಅಮೆರಿಕದ ವಿಜ್ಞಾನ ಅಭಿವೃದ್ಧಿ ಸಂಘಕ್ಕೆ ಈತನನ್ನು ಅಧ್ಯಕ್ಷನಾಗಿ ಚುನಾಯಿಸಲಾಯಿತು.

ಮಾರ್ಗನ್ ತನ್ನ ಮನೆಯ ಸಮೀಪದಲ್ಲಿ ವಾಸವಿದ್ದ ಸೆನೆಕ ಇರಾಕ್ವಿಸ್ ಜನರ ವಿಚಾರದಲ್ಲಿ ಅತೀವ ಆಸಕ್ತಿ ಬೆಳೆಸಿಕೊಂಡಿದ್ದ. ಅವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಹಾಗೂ ಅವರ ಕಲ್ಯಾಣಕ್ಕಾಗಿ ಶ್ರಮಿಸಲು ಈತ ಪದವೀಧರನಾದ ಮೇಲೆ ದಿಗಾರ್ಡಿಯನ್ ನಾಟ್ ಎಂಬ ಗುಪ್ತಸಮಾಜವೊಂದನ್ನು ಸೇರಿದ. ಅಲ್ಲಿ ಈತನ ಮಾನವಕುಲಶಾಸ್ತ್ರೀಯ ಅಧ್ಯಯನ ಪ್ರಾರಂಭವಾಯಿತು. ಅಲ್ಲಿಯ ಪ್ರಮುಖ ಸೆನೆಕ ಎಲ್ ಎಸ್ ಪಾರ್ಕರ್ ಅವರ ಪರಿಚಯವಾಗಿ ಈತನು ಆಸಕ್ತಿ ಇನ್ನೂ ಗಾಢವಾಯಿತು. ಆ ಸಮಾಜದ ಹೆಸರನ್ನು ಬದಲಾಯಿಸಿ ಇಂಡಿಯನ್ ಹೆಸರನ್ನು ಇಡಲಾಯಿತು. ಮೋಸದಿಂದ ಇಂಡಿಯನ್ ಜನರಿಗೆ ಸೇರಿದ್ದ ಭೂಪ್ರದೇಶಗಳನ್ನು ಆಕ್ರಮಿಸಿಕೊಳ್ಳಬೇಕೆಂದು ಮಾಡಿದ್ದ ಒಂದು ಕಂಪನಿಯ ವಿರುದ್ಧ ವಾದಿಸಿ ಅದರ ಪ್ರಯತ್ನಗಳನ್ನೆಲ್ಲ ನಿರರ್ಥಕಗೊಳಿಸಿ, ಆ ಜನರ ಪ್ರೀತ್ಯಾದರಗಳಿಗೆ ಈತ ಪಾತ್ರನಾದ. 1849ರಲ್ಲಿ ನ್ಯೂಯಾರ್ಕಿನ ವಿಶ್ವವಿದ್ಯಾಲಯ ಮಾನವಕುಲಶಾಸ್ತ್ರೀಯ ವಿವರಗಳ ಸಂಗ್ರಹ ಕಾರ್ಯಕ್ಕಾಗಿ ಈತನನ್ನು ನೇಮಿಸಿತು. ಈತ ಇರಾಕ್ವಿಸ್ ಜನರ ಇತಿಹಾಸ, ಸಂಸ್ಕøತಿ ಹಾಗೂ ಸಾಮಾಜಿಕ ರಚನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದಕ್ಕಾಗಿ ಗಾಢ ಸಂಶೋಧನೆಗಳನ್ನು ಕೈಗೊಂಡ. ಈ ಎಲ್ಲ ಸಂಶೋಧನೆಗಳ ಫಲವಾಗಿ 1844-46ರಲ್ಲಿ ಲೆಟರ್ಸ್ ಆನ್ ದಿ ಇರಾಕ್ವಿಸ್ ಮತ್ತು ವಿಶ್ವವಿದ್ಯಾಲಯಕ್ಕಾಗಿ ಸಿದ್ಧಪಡಿಸಲಾದ ಮಾನವಕುಲಶಾಸ್ತ್ರೀಯ ದಾಖಲೆ ಬೆಳಕು ಕಂಡವು. ಅನಂತರ 1851ರಲ್ಲಿ ಈ ಅಮೂಲ್ಯ ದಾಖಲೆ ದಿ ಲೀಗ್ ಆಫ್ ದಿ ಹೊ-ಡೆ-ನೊ-ಸೌ-ನೀ ಅಥವಾ ಇರಾಕ್ವಿಸ್ ಎಂಬ ಹೆಸರಿನಿಂದ ಪ್ರಕಟಗೊಂಡಿತ್ತು. ಈ ಕೃತಿ ಪ್ರಪಂಚದಲ್ಲಿ ಪ್ರಥಮ ಬಾರಿಗೆ ಇಂಡಿಯನ್ ಜನರ ಬಗ್ಗೆ ಸಿದ್ಧಪಡಿಸಲಾದ ವೈಜ್ಞಾನಿಕ ದಾಖಲೆ ಎಂಬುದಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು; ಈತನಿಗೆ ಅಮೆರಿಕದ ಮಾನವಶಾಸ್ತ್ರದ ಪಿತಾಮಹ ಎಂಬ ಹೆಸರು ಬರುವಂತೆ ಮಾಡಿತು.

1858ರಲ್ಲಿ ಮಿಚಿಗನ್ನಿನಲ್ಲಿ ರೈಲುಮಾರ್ಗ ನಿರ್ಮಾಣದ ಮೇಲ್ವಿಚಾರಣೆಯಲ್ಲಿ ತೊಡಗಿದ್ದಾಗ ಈತನ ಗಮನ ಬಜಿಬವೇ ಜನರ ಮೇಲೆ ಕೇಂದ್ರೀಕೃತವಾಯಿತು. ಅವರನ್ನು ಗಾಢವಾಗಿ ಅವಲೋಕಿಸಿದ ಈತನಿಗೆ ಬಜಿಬವೇ ಹಾಗೂ ಇರಾಕ್ವಿಸ್ ಜನರಲ್ಲಿ ಸಂಬಂಧಿಗಳನ್ನು ಗುರುತಿಸುವ ಕ್ರಮ ಒಂದೇ ರೀತಿಯದೆಂದು ಸ್ಪಷ್ಟವಾಯಿತು. ಈ ಹೋಲಿಕೆಯ ಆಧಾರದ ಮೇಲೆ ಈತ ಇರಾಕ್ವಿಸ್ ಹಾಗೂ ಡಕೋಟಾ ತಂಡಗಳ ಸಂಬಂಧಗಳನ್ನು ಗುರುತಿಸುವ ವ್ಯವಸ್ಥೆಯನ್ನು ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳಲ್ಲಿ ವಾಸಿಸುತ್ತಿದ್ದ ಮೂಲನಿವಾಸಿಗಳ ಸಮಾಜಗಳಲ್ಲೂ ಕಾಣಬಹುದು ಎಂಬುದಾಗಿ ಅಭಿಪ್ರಾಯ ಪಟ್ಟ. ಅನಂತರ ಇದೇ ತೆರನಾಗಿದ್ದ ವ್ಯವಸ್ಥೆ ಜಗತ್ತಿನ ಇತರ ಆದಿವಾಸಿ ತಂಡಗಳಲ್ಲೂ ಇರಬಹುದು ಎಂದು ಎಣಿಸಿ ವ್ಯಾಪಕವಾದ ಕ್ಷೇತ್ರ-ಸಂಶೋಧನಾ ಕಾರ್ಯಕ್ರಮವನ್ನು ಯೋಜಿಸಿಕೊಂಡರು, ಅದಕ್ಕೆ ತಕ್ಕ ಪ್ರಶ್ನಾವಳಿಗಳನ್ನು ರಚಿಸಿ ದೂರದ ಪ್ರದೇಶಗಳಿಗೆ ಕಳುಹಿಸಿ, ಒಂದೇ ವಿಧವಾಗಿದ್ದ ಸಂಬಂಧ ಸೂಚಿಸುವ ವ್ಯವಸ್ಥೆಯನ್ನು ಮಾನವಕುಲದಲ್ಲೆಲ್ಲ ಕಾಣಬಹುದು ಎಂಬ ವಿವರಗಳನ್ನು ಸಂಗ್ರಹಿಸಿದ. ಈತನ ಸಿಸ್ಟಮ್ಸ್ ಆಫ್ ಕಾನ್‍ಸ್ಯಾಂಗ್ವಿನಿಟಿ ಅಂಡ್ ಅಫಿನಿಟಿ ಆಫ್ ದಿ ಹ್ಯೂಮನ್ ಫ್ಯಾಮಿಲಿ (1870) ಎಂಬ ಗ್ರಂಥ ಹೊರಬಂದಿತು.

ಅನಂತರ 1871ರಲ್ಲಿ ಈತನ ಮಹೋನ್ನತ ಕೃತಿ ಏನ್ಷೆಂಟ್ ಸೊಸೈಟಿ ಪ್ರಕಟವಾಯಿತು. ಈ ಕೃತಿಯಲ್ಲಿ ಅನ್ವೇಷಣೆಗಳ ಮೂಲಕ ಮಾನವ ಬುದ್ಧಿಶಕ್ತಿಯ ವಿಕಾಸ; ಸಹಕಾರ ಭಾವನೆ ಬೆಳೆದ ಬಗೆ, ಕುಟುಂಬ ಕಲ್ಪನೆಯ ವಿಕಾಸ ಮತ್ತು ಆಸ್ತಿ ಭಾವನೆಯ ವಿಕಾಸ ಎಂಬ ನಾಲ್ಕು ವಿಭಾಗಗಳನ್ನು ಒಳಗೊಂಡಿದೆ. ಮಾರ್ಗನ್ ವಿಕಾಸ ಸಿದ್ಧಾಂತವನ್ನು ಪ್ರತಿಪಾದಿಸಿ, ಸಂಸ್ಕøತಿ ಕಾಡುತನ, ನಾಗರಿಕತೆ ಮತ್ತು ಅನಾಗರಿಕತೆ ಎಂಬ ಮೂರು ಹಂತಗಳ ಮೂಲಕ ವಿಕಾಸಗೊಂಡಿದೆ; ವಿವಾಹ ಸ್ವೇಚ್ಛಾಲೈಂಗಿಕ ಸಂಪರ್ಕದಿಂದ ಆರಂಭವಾಗಿ ಏಕಸಂಗಾತಿ ವಿವಾಹ ಪದ್ಧತಿಯ ಹಂತದಲ್ಲಿ ಕೊನೆಗೊಂಡಿದೆ ಎಂಬುದನ್ನು ತಿಳಿಯಪಡಿಸಿದ್ದಾನೆ. ಈ ಕೃತಿ ಸಮತಾವಾದಿ ಸಮಾಜಗಳಲ್ಲಿ ಜನಪ್ರಿಯವಾಯಿತಲ್ಲದೆ ಮಾಕ್ರ್ಸ್ ಮತ್ತು ಎಂಗಲ್ಸ್‍ರನ್ನು ಕೂಡ ಆಕರ್ಷಿಸಿತು.

ಆಸ್ಟ್ರೇಲಿಯ ಖಂಡದಲ್ಲಿ ಮಾನವಕುಲಶಾಸ್ತ್ರದ ಬೆಳೆವಣಿಗೆಗಾಗಿ ಈತ ನೀಡಿದ ಕೊಡುಗೆ ಗಮನಾರ್ಹ. ಆಸ್ಟ್ರೇಲಿಯದ ಆದಿವಾಸಿ ತಂಡಗಳಲ್ಲಿ ಪ್ರಚಲಿತವಾಗಿದ್ದ ಬಂಧುತ್ವದ ಬಗ್ಗೆ ಪ್ರಕರಣ ಗ್ರಂಥವೊಂದನ್ನು ಪ್ರಕಟಿಸಿದ ಪ್ರಪ್ರಥಮ ಮಾನವ ವಿಜ್ಞಾನಿ ಈತ. ಫಿಜಿಯಲ್ಲಿದ್ದ ಲೋರಿಮರ್ ಫೈಸನ್ ಎಂಬ ಇಂಗ್ಲಿಷ್ ಪಾದ್ರಿ ಹಾಗೂ ಆಸ್ಟ್ರೇಲಿಯದಲ್ಲಿದ್ದ ಎ.ಎನ್.ಹೋವಿಟ್ ಅವರಿಗೆ ಮಾನವಕುಲಶಾಸ್ತ್ರದ ತತ್ತ್ವಗಳನ್ನು ಅಂಚೆಯ ಮೂಲಕವೇ ಹೇಳಿಕೊಟ್ಟ. ಕ್ಷೇತ್ರ-ಸಂಶೋಧನೆಯಲ್ಲಿ ಅವರಿಗೆ ಮಾರ್ಗದರ್ಶಕನಾದ. ಅವರು ಬರೆದ ಕೃತಿಗೆ ಪೀಠಿಕೆ ಬರೆದ. ಈತನ ದಿ ಸೆವೆನ್ ಸಿಟೀಸ್ ಆಫ್ ಬೋಲ (1869) ಮತ್ತು ಈತನ ಕೊನೆಯ ಕಾಲದಲ್ಲಿ ರಚಿಸಿದ ಹೌಸಸ್ ಅಂಡ್ ಹೌಸ್ ಲೈಫ್ ಆಫ್ ದಿ ಅಮೆರಿಕನ್ ಅ್ಯಬೊರಿಜಿನೀಸ್ (1881) ಮುಂತಾದ ಕೃತಿಗಳು ಈತ ಪ್ರತಿಭಾವಂತ ಬರೆಹಗಾರ ಎಂಬುದಕ್ಕೆ ಸಾಕ್ಷೀಭೂತವಾಗಿವೆ.
(ಎಂ.ಬಿ.ಆರ್.ಎ.; ಎ.ಸಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ